ಪಟವರ್ಧನ್, ನೀಲಕಂಠರಾವ್ ರಾಮಚಂದ್ರ
1881-1958. ಆಯುರ್ವೇದ ವೈದ್ಯಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರು. ಹುಟ್ಟಿದ್ದು ಜನವರಿ 1881ರಲ್ಲಿ, ಬನವಾಸಿಯಲ್ಲಿ. ತಂದೆ ರಾಮಚಂದ್ರರಾವ್, ಈತ ಅವರ ದ್ವಿತೀಯ ಪುತ್ರ. ಬಲುಭಾಗದ ಶಿಕ್ಷಣ ಮನೆಯಲ್ಲಿಯೇ ತಂದೆಯವರಿಂದ ನಡೆಯಿತು. ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆದದ್ದು ತೀರ ಕಡಿಮೆ. ವೈದ್ಯ ವೃತ್ತಿಯಂತೂ ಮನೆತನದಲ್ಲಿ ಆನುವಂಶಿಕವಾಗಿ ಬಂದದ್ದು. ಇವರಿಗೆ ಅದರಲ್ಲಿ ಸಹ ಆಸಕ್ತಿ, ಸಂಶೋಧಕ ಪ್ರವೃತ್ತಿ. 1912ರಲ್ಲಿ ಶಿರಸಿಗೆ ಬಂದು ಆಸ್ಪತ್ರೆಯೊಂದನ್ನು ತೆರೆದರು. ವಿದ್ಯೆಯೊಂದಿಗೆ ಇವರ ಕೈಗುಣವೂ ಸರಿ ಕ್ಷಿಪ್ರದಲ್ಲಿಯೇ ಇವರ ಕೀರ್ತಿ ಹರಡಿತು. ಆಯುರ್ವೇದಕ್ಕೆ ಪೂರಕವಾಗಿ ಜೋತಿಷ್ಯವನ್ನೂ ಇವರು ಅಭ್ಯಸಿಸಿದ್ದರು. ಜೊತೆಗೆ ತಾವೇ ಶಾಸ್ತ್ರೋಕ್ತವಾಗಿ ವನಸ್ಪತಿಗಳಿಂದ ಔಷಧಿಗಳನ್ನು ತಯಾರಿಸಿದರು. ಹೊರಗಿನ ವೈದ್ಯರುಗಳಿಂದಲೂ ಇವರ ಸಿದ್ಧೌಷಧಗಳಿಗೆ ತುಂಬ ಬೇಡಿಕೆಗಳು ಬರತೊಡಗಿದುವು. ವನಸ್ಪತಿಗಳಿಂದ ಇವರು ತಯಾರಿಸಿದ ಸುವಾಸಿತ ನಾಶೀಪುಡಿ ನೀಲಕಂಠರಾಯರ ನಾಶೀಪುಡಿ ಎಂದೇ ಪ್ರಸಿದ್ಧವಾಯಿತು.

	ವೈದ್ಯಶಾಸ್ತ್ರದ ವಿಶೇಷ ಅಧ್ಯಯನಕ್ಕಾಗಿಯೇ ತಮ್ಮ ದವಾಖಾನೆಯ ಮುಂದೆ ನಾಲ್ಕು ಎಕರೆ ಕ್ಷೇತ್ರದಲ್ಲಿ ಇವರು ಬೆಳಿಸಿದ ಜೀವಂತ ವನಸ್ಪತಿ ಉದ್ಯಾನ ಎರಡೂವರೆ ಸಾವಿರಕ್ಕೂ ಮೇಲ್ಪಟ್ಟು ವಿವಿಧ ವನಸ್ಪತಿಗಳಿಂದ ಕೂಡಿತ್ತು. ಇದನ್ನು ನೋಡಿದ ನಾಡಿನ ಹಿರಿಯರು ಬಲು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

	ಇಷ್ಟಲ್ಲದೆ ಶೆಣೈ ಎಂಬ ಚಿತ್ರಕಾರರಿಂದ ಸಾವಿರಾರು ಅಪೂರ್ವ ವನಸ್ಪತಿಗಳ ಬೇರು, ಕಾಂಡ, ಎಲೆ, ಹೂ, ಕಾಯಿ ಮೊದಲಾದ ವಿವರಗಳನ್ನು ಸ್ವಾಭಾವಿಕ ಬಣ್ಣಗಳಲ್ಲಿಯೇ ಇವರ ಬರೆಸಿದರು. ಅವಕ್ಕೆ ವಿಭಿನ್ನ ಭಾಷೆಗಳ ಹೆಸರುಗಳನ್ನೂ ಕೊಟ್ಟಿರುವುದು ಗಮನಾರ್ಹ.

	ನಾಡಿನ ಬೇರೆ ಬೇರೆ ಭಾಗಗಳಲ್ಲಿ ವನಸ್ಪತಿಗೆ ಬೇರೆ ಹೆಸರು ಇರುವುದು ಸುಪ್ರಸಿದ್ಧ. ಒಂದೇ ವನಸ್ಪತಿಗೆ ಮೂರು ನಾಲ್ಕು ಹೆಸರು ಒಂದೇ ಭಾಷೆಯಲ್ಲಿ ಇದ್ದದ್ದೂ ಇದೆ. ಆದ್ದರಿಂದ ಎಲ್ಲ ಕಡೆಯ ಹೆಸರು ಒತ್ತಟ್ಟಿಗೆ ಸಂಗ್ರಹಿಸಿ ಸಮವಾದ ಸಂಸ್ಕøತ, ಲ್ಯಾಟಿನ್, ಮರಾಠಿ ಹೆಸರುಗಳನ್ನೂ ಕೊಟ್ಟು ಉತ್ತಮವಾದ ಒಂದು ವನಸ್ಪತಿ ಕೋಶವನ್ನು ಇವರು ರಚಿಸಿದ್ದಾರೆ. ಇದಿನ್ನೂ ಅಚ್ಚಿನ ಮನೆ ಕಂಡಿಲ್ಲ.

	1939ರಲ್ಲಿ 11ನೆಯ ಅಖಿಲ ಕರ್ನಾಟಕ ಅಯುರ್ವೇದ ಸಮ್ಮೇಳನ ಶಿರಸಿಯಲ್ಲಿ ಏರ್ಪಟ್ಟಾಗ ಇವರು ಮುಂದಾಳಾಗಿ ನಿಂತು ಅದನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದರು.

	ಪಟವರ್ಧನರ ಕೀರ್ತಿ ಕರ್ನಾಟಕದಾದ್ಯಂತವಷ್ಟೇ ಅಲ್ಲ, ದಕ್ಷಿಣ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಿಗೂ ಹಬ್ಬಿತ್ತು. ಮಹಾರಾಷ್ಟ್ರದ ಆಯುರ್ವೇದ ಪಂಡಿತರು 1953ರಲ್ಲಿ ಇವರ ಗೌರವಾರ್ಥ ಆಯುರ್ವೇದ ಸ್ಮರಣ ಸಂಚಿಕೆಯನ್ನು ಪ್ರಕಟಿಸಿದ್ದಾರೆ. ತಿಲಕರಿಂದ ಸ್ಫೂರ್ತಿ ಪಡೆದ ಪಟವರ್ಧನರು ಸ್ವಾತಂತ್ರ್ಯ ಹೋರಾಟದಲ್ಲಿ ಕುಟುಂಬ ಸಮೇತ ಸಕ್ರಿಯವಾಗಿ ಧುಮುಕಿದರು. ಪರದೇಶಿ ವಸ್ತ್ರ್ರಗಳನ್ನು ತ್ಯಜಿಸಿದರು. ಅಸ್ಪøಶ್ಯರಿಗೆ, ನಿರ್ಗತಿಕರಿಗೆ ಪುಕ್ಕಟೆಯಾಗಿಯೇ ಔಷಧಿಕೊಟ್ಟರು. ರೋಗಿಗಳ ಸಲುವಾಗಿ ಧರ್ಮಶಾಲೆಯನ್ನು ಕಟ್ಟಿಸಿದರು. ಶಾಲೆಯ ಬಡಮಕ್ಕಳಿಗೆ ಅನೇಕ ರೀತಿಯಿಂದ ನೆರವಾದರು. ಹೀಗೆ ನಿಃಸ್ವಾರ್ಥ ಶ್ರಮಜೀವನಕ್ಕೆ ಪಟವರ್ಧನರು ಉತ್ತಮ ನಿದರ್ಶನವಾದರು.
(ಆರ್.ಜಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ